ಇಲಾಖೆಯ ಸಂಸ್ಥಾಪಕರು

ಮೈಸೂರು ಸಂಸ್ಥಾನದ ಮಹಾರಾಜ ಘನತೆವೆತ್ತ ಹತ್ತನೇ ಚಾಮರಾಜ ಒಡೆಯರ್ ರವರು.

ಆಳ್ವಿಕೆ:- 1881 ರಿಂದ 1894

   ಮೈಸೂರು ಸಂಸ್ಥಾನದ 23 ನೇ ಮಹಾರಾಜರಾದ ಘನತೆವೆತ್ತ ಹತ್ತನೇ ಚಾಮರಾಜ ಒಡೆಯರ್ ರವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಮಾಡಿದ ಹಲವಾರು ರಾಜ್ಯಾಭ್ಯುದಯ ಕಾರ್ಯಗಳಲ್ಲಿ ಸರ್ಕಾರಿ ನೌಕರರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಮಹತ್ತರವಾದ ಕಡ್ಡಾಯ ವಿಮಾ ಯೋಜನೆಯನ್ನು ಜಾರಿಗೊಳಿಸಲು 1891 ರಲ್ಲಿ ಅಂಕಿತ ಹಾಕುವ ಮೂಲಕ ವಿಮಾ ಇಲಾಖೆಯ ಸಂಸ್ಥಾಪನೆಗೆ ಕಾರಣಕರ್ತರಾದರು.

ಮೈಸೂರು ಸಂಸ್ಥಾನದ ದಿವಾನರಾದ ಸರ್.ಕೆ.ಶೇಷಾದ್ರಿ ಐಯ್ಯರ್ರವರು.

ಅವಧಿ:- 1883 - 1901

    ಸನ್ ಸಾವಿರದ ಎಂಟು ನೂರ ಎಂಭತ್ತೊಂಭತ್ತರ ಆಗಸ್ಟ್ 23 ರಂದು ಅಂದಿನ ಮೈಸೂರಿನ ಸಂಸ್ಥಾನದ ದಿವಾನರು, ಮಹಾನ್ ರಾಜತಾಂತ್ರಿಕ ನಿಪುಣರೂ ಆದ ಸರ್ ಕೆ.ಶೇಷಾದ್ರಿ ಐಯ್ಯರ್ ರವರು ತಮ್ಮ ದೂರದೃಷ್ಟಿತ್ವ ಮತ್ತು ವಿವೇಚನೆಯಿಂದ ಸರ್ಕಾರಿ ನೌಕರರ ಅಕಾಲಿಕ ಮರಣದಿಂದ ಆತನ ಕುಟುಂಬದ ಮೇಲಾಗುವ ಸರ್ವಾಂಗೀಣ ಪರಿಣಾಮವನ್ನರಿತು ರಕ್ಷಣೆಯ ಭರವಸೆಯನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿ, "ಸರ್ಕಾರಿ ನೌಕರರು ವಯೋ ನಿವೃತಿ ಹೊಂದಿದ ಸಂದರ್ಭದಲ್ಲಿ ಜೀವನ ಸಂಧ್ಯಾಕಾಲದ ಆರ್ಥಿಕ ಅಗತ್ಯತೆಗಳನ್ನು ನಿರ್ವಹಿಸಲು, ದುರ್ದೈವವಶಾತ್ ಸೇವಾವಧಿಯಲ್ಲಿ ಮೃತಪಟ್ಟರೆ ಆ ನೌಕರನ ಕುಟುಂಬದ ಭವಿಷ್ಯ ಜೀವನ ಸುಭದ್ರತೆಯಿಂದ ಸಾಗಲು ಅಗತ್ಯವಾದಆರ್ಥಿಕ ಭದ್ರತೆಯನ್ನು ಒದಗಿಸುವ" ಕಡ್ಡಾಯ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸುವ ಸಲುವಾಗಿ ರಾಜ ಸಮ್ಮುಖದಲ್ಲಿ ಟಿಪ್ಪಣಿಯೊಂದನ್ನು ಮಂಡಿಸಿಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸ್ಥಾಪನೆಗೆ ನಾಂದಿ ಹಾಡಿದರು.